ಬೆಂಗಳೂರು,ಏ,೨೬:ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ಎರಡನೇ ವರದಿ ಬಹುತೇಕ ಪೂರ್ಣಗೊಂಡಿದ್ದು, ಗಣಿಗಾರಿಕಗೆಯಲ್ಲಿ ಅಕ್ರಮವೆಸಗಿರುವ ಆರು ಮಂದಿ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮ ವರದಿ ಸಲ್ಲಿಸುವ ಮುಂಚೆ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡುವುದು ಸಂಪ್ರದಾಯ. ಅದರಂತೆ ನೀಡಲಾಗಿರುವ ನೋಟೀಸ್‌ಗೆ ಉತ್ತರ ನೀಡಲು ಈ ಅಧಿಕಾರಿಗಳು ಸಾಕಷ್ಟು ಸಮಯಾವಕಾಶ ಕೇಳಿದ್ದಾರೆ.
ಕೆಲವರು ವಾರಗಳ ಕಾಲ ಅವಕಾಶ ಕೋರಿದ್ದರೆ, ಇನ್ನೂ ಕೆಲವರು ತಿಂಗಳುಗಳ ಗಟ್ಟಲೆ ಸಮಯ ಕೇಳಿದ್ದಾರೆ. ಪರಿಸ್ದಿತಿ ಹೀಗಿರುವಾಗ ಈ ತಿಂಗಳ ೨೯ ರ ವರೆವಿಗೆ ಮಾತ್ರ ಅವಕಾಶ ನೀಡಿ ನೋಟಿಸ್ ನೀಡಲಾಗಿದೆ. ಸ್ಪಷ್ಟೀಕರಣ ನೀಡದಿದ್ದರೆ ಮತ್ತೆ ಕಾಲಾವಕಾಶವನ್ನು ವಿಸ್ತರಿಸುವುದಿಲ್ಲ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸ್ಪಷ್ಟಪಡಿಸಿದರು.
ಎರಡನೇ ವರದಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯಲ್ಲದೇ ಗ್ರಾನೈಟ್ ಗಣಿಗಾರಿಕೆ ಕಡೆಗೆ ಹೆಚ್ಚಿನ ಗಮನಹರಿಸಲಾಗಿದೆ. ಚಾಮರಾಜನಗರ, ರಾಮನಗರ, ಕನಕಪುರದಲ್ಲಿ ಗ್ರಾನೈಟ್ ಗಣಿಗಾರಿಕೆ ಹೆಚ್ಚಿನ ಪ್ರಮಾಣದಲ್ಲಿದೆ. ಈ ಗಣಿಗಾರಿಕೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದ ಖನಿಜ ಸಂಪನ್ಮೂಲ ಲೂಟಿಯಾಗುತ್ತಿದೆ ಎಂದು ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲ ವರದಿಯಲ್ಲಿ ತುಮಕೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕ ಅಕ್ರಮಗಳು ಜರುಗಿದ್ದವು. ವರದಿ ಮೇಲೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ ಕಾರಣ ಈ ಸಂಬಂಧ ಲೋಕಾಯುಕ್ತ ಕಾಯ್ದೆ ೧೨[೫] ರನ್ವಯ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಲಾಗಿತ್ತು.
ಈ ಮಧ್ಯೆ ಕೇಂದ್ರ ಗಣಿ ಇಲಾಖೆ, ಸುಪ್ರೀಂ ಕೋರ್ಟ್‌ನ ವಿಶೇಷಾಧಿಕಾರ ಸಮಿತಿ ತನಿಖೆ ನಡೆಸುತ್ತಿದೆ. ಇದರ ಜೊತೆಗೆ ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪು ನೀಡುವುದು ಬಾಕಿಯಿದೆ. ಈ ಎಲ್ಲಾ ತನಿಖೆ ಹಾಗೂ ತೀರ್ಪುಗಳಿಗೆ ಲೋಕಾಯುಕ್ತರ ನಿಲುವು ವ್ಯತಿರಿಕ್ತವಾಗಬಾರದು ಎಂಬ ಕಾರಣದಿಂದ ಸಧ್ಯಕ್ಕೆ ಸುಮ್ಮನಿರುವುದಾಗಿ ಹೇಳಿದರು.
ಮೊದಲ ವರದಿಯಲ್ಲಿ ತಮ್ಮ ಹೆಸರಿರುವುದನ್ನು ಐಪಿಎಸ್ ಅಧಿಕಾರಿಯೊಬ್ಬರು ಕರ್ನಾಟಕ ಆಡಳಿತ ನ್ಯಾಯಮಂಡಳಿ ಮುಂದೆ ಪ್ರಶ್ನಿಸಿ ತಮ್ಮ ವಿರುದ್ಧ ವಿಚಾರಣೆ ನಡೆಸಲು ಸರ್ಕಾರಕ್ಕೆ ಅಧಿಕಾರವೇ ಇಲ್ಲ ಎಂದು ವಾದಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಹೈಕೋರ್ಟ್ ಮುಂದೆ ಮೇಲ್ಮನವಿ ಸಲ್ಲಿಸಿಲ್ಲ. ಈ ವಿಚಾರದಲ್ಲೂ ತಾವು ಕಾದು ನೋಡುತ್ತಿರುವುದಾಗಿ ಸಂತೋಷ್ ಹೆಗ್ಡೆ ತಿಳಿಸಿದರು.